ಫಾಕ್ಸ್, ಸಿರಿಲ್ ಸ್ಯಾಂಕೀ  1884-1951. ಜನನ ಕಲ್ಕತ್ತ 24 ಫೆಬ್ರವರಿ 1884; ಮರಣ ಕಲ್ಕತ್ತ 28 ಡಿಸೆಂಬರ್ 1951. ಭಾರತದ ಭೂವೈಜ್ಞಾನಿಕ ಸರ್ವೇಕ್ಷಣ ಇಲಾಖೆಯ ನಿರ್ದೇಶಕರಾಗಿ, 1939-43, ಮೌಲ್ಯಯುತ ಕೊಡುಗೆಗಳನ್ನು ನೀಡಿದ ಭೂವಿಜ್ಞಾನಿ. ನಿರ್ದೇಶಕತ್ವದ ಅಧಿಕಾರ ವಹಿಸಿಕೊಳ್ಳುವ ಮೊದಲು ಇವರು ಖಾಸಿ ಮತ್ತು ಜಯಂತಿಯಾ ಬೆಟ್ಟಗಳಲ್ಲಿ ಭೂವೈಜ್ಞಾನಿಕ ನಕ್ಷೆಗಳನ್ನು ರಚಿಸುವ ಕಾರ್ಯದಲ್ಲಿ ಮಗ್ನರಾಗಿದ್ದರು. ಅಲ್ಲದೆ ಶಿಲ್ಲಾಂಗ್ ಶ್ರೇಣಿಗಳ ಕಡಪ ಕಾಲಮಾನವನ್ನೂ ಚೆರ್ರಾ ಮರಳು ಶಿಲೆಗಳ ಟರ್ಷಿಯರಿ ವಯಸ್ಸಿನ ಬಗೆಗೆ ಸುಳಿವುಗಳನ್ನೂ ಪತ್ತೆಮಾಡುವುದರಲ್ಲಿ ನಿರತರಾಗಿದ್ದರು. ಫಾಕ್ಸ್ ನಿರ್ದೇಶಕರಾಗಿ ನೇಮಕಗೊಂಡಾಗಲೇ ಎರಡನೆಯ ಮಹಾಯುದ್ಧ ಪ್ರಾರಂಭವಾಯಿತು. ಒಂದನೆಯ ಮಹಾಯುದ್ಧದಲ್ಲಿ ಇವರು ಸಕ್ರ್ರಿಯ ಸೇವೆ ಸಲ್ಲಿಸಿದ್ದರು. ಎಂದೇ ಸೈನ್ಯಕ್ಕೆ ನೆರವಾಗುವ ಉದ್ದೇಶದಿಂದ ಇವರು ತಮ್ಮ ಇಲಾಖೆಯ ಸಂಪನ್ಮೂಲಗಳನ್ನು ರೂಢಿಸುವುದರಲ್ಲಿ ಒಡನೆ ಕಾರ್ಯೋದ್ಯುಕ್ತರಾದರು. ಆಗ ಇವರು ಕೈಗೊಂಡ ಕಾರ್ಯವೆಂದರೆ ಭಾರತದಲ್ಲಿ ಖನಿಜಗಳ ವಿಭವ (ಪೊಟೆನ್ಯಿಯಲ್) ಹಾಗೂ ವಿತರಣೆ ಕುರಿತ ವೈಜ್ಞಾನಿಕ ಸರ್ವೇಕ್ಷಣೆ. ಆದಿನಗಳಂದು ಪ್ರಾಂತಸರ್ಕಾರಗಳು ಖನಿಜಗಳ ಅನ್ವೇಷಣೆ, ದೃಢೀಕರಣ (ಫ್ರೂವಿಂಗ್) ಮತ್ತು ಆರ್ಥಿಕ ಉತ್ಪಾದನೆ ಇವುಗಳಲ್ಲಿ ಮಾತ್ರ ಆಸಕ್ತಿ ಹೊಂದಿದ್ದವೇ ವಿನಾ ಖನಿಜಗಳ ಭೂವೈಜ್ಞಾನಿಕ ಸಮೀಕ್ಷೆಗಳಲ್ಲಿ ಅಲ್ಲ. ಸಾಮಾನ್ಯವಾಗಿ ವೈಜ್ಞಾನಿಕ ಉಪಕರಣಗಳ ಇಲ್ಲವೇ ಯೋಗ್ಯ ತಾಂತ್ರಿಕ ಸಿಬ್ಬಂದಿಯ ಆಭಾವದಿಂದ ಅಭಿವೃದ್ಧಿ ಕಾರ್ಯಗಳು ಮಂದಗತಿಯವಾಗಿದ್ದವು. ಈ ಪರಿಸ್ಥಿತಿಯನ್ನು ಗಮನಿಸದ ಫಾಕ್ಸ್ ತಮ್ಮ ಇಲಾಖೆಯಲ್ಲಿ ಖನಿಜಗಳ ಉಪಯೋಗಶಾಖೆ (ಯುಟಿಲೈಸೇಶನ್ ಬ್ರಾಂಚ್) ಎಂಬುದನ್ನು ಪ್ರವರ್ತಿಸಿದರು.

	ಈ ಶಾಖೆ ನಡೆಸಿದ ಚಟುವಟಿಕೆಗಳ ಸಾರಾಂಶ ಹೀಗಿದೆ: ಮೇವಾರ್ ರಾಜ್ಯದ ಸ್ಸಾವರ್ ಎಂಬಲ್ಲಿ ಅತಿ ಪುರಾತನ ಗಣಿಗಳಿಂದ ಸೀಸ ಮತ್ತು ಸತುವುಗಳನ್ನು ಅಗೆದು ತೆಗೆಯಲಾಯಿತು. ಪುರಾತನರು ಈ ಗಣಿಗಳನ್ನು ಜಲಮಟ್ಟದ (ವಾಟರ್ ಟೇಬಲ್) ವರೆಗೆ ತೋಡಿದ್ದರು. ರಜಪುತಾನ, ಬಿಹಾರ, ಮದರಾಸು ಮತ್ತು ಮಹೇಶ್ರೀ ಎಂಬ ಸ್ಥಳಗಳಲ್ಲಿ ಅಧಿಕೋತ್ಪಾದನ ವಿಭಾಗಗಳನ್ನು ಪ್ರಾರಂಭಿಸಿದರು. ಈಗ ಪಾಕಿಸ್ತಾನಕ್ಕೆ ಸೇರಿರುವ ಬಲೂಚಿಸ್ತಾನದಲ್ಲಿಯ ಕೊ-ಐ-ಸುಲ್ತಾನ್ ಎಂಬ ಗಂಧಕ ನಿಕ್ಷೇಪವನ್ನು ಪುನರುತ್ಥಾನಗೊಳಿಸಿದರು.

	ಆಫ್ಘಾನಿಸ್ತಾನದಲ್ಲಿ ಕಲ್ಲಿದ್ದಲು ಮತ್ತು ಉಪ್ಪಿನ ನಿಕ್ಷೇಪಗಳನ್ನು ಸಮೀಕ್ಷಿಸಲಾಯಿತು. ಬಿಹಾರ, ಪಂಜಾಬ್, ಬಂಗಾಳ, ಮಹಾರಾಷ್ಟ್ರ ಮುಂತಾದ ಪ್ರದೇಶಗಳಲ್ಲಿ ಕೆಲವು ಮುಖ್ಯವಾದ ಖನಿಜಗಳ ಚಿಲುಮೆಗಳನ್ನು ಪತ್ತೆಹಚ್ಚಲಾಯಿತು. ಇವುಗಳಿಂದ ಕೆಲವು ಖನಿಜಗಳ ಪಡೆಯುವ ಸಾಧ್ಯತೆಗಳು ಕಂಡು ಬಂದವು. ಭಾರತದ ಭೂ ವೈಜ್ಞಾನಿಕ ಇತಿಹಾಸದಲ್ಲಿ ಫಾಕ್ಸ್ ಅವರದು ಶಾಶ್ವತ ಹೆಸರು.
(ಎಂ.ಎಸ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ